ಅಗ್ನ್ಯಬಾಧಿತ ಕಟ್ಟಡ

 ಅಲ್ಯೂಮಿನಸ್ ಸಿಲಿಕೇಟ್, ಸುಣ್ಣ, ಕಾರ್ಬೊನೇಟುಗಳು, ಗಂಧಕಾಂಶವಿರುವ ಕಬ್ಬಿಣ, ಮೂಲರೂಪದ ಸಿಲಿಕ, ಪೊಟಾಷ್, ಸೋಡ ಮತ್ತು ನೀರು-ಇವುಗಳನ್ನು ಸೂಕ್ತಪ್ರಮಾಣದಲ್ಲಿ ಹೊಂದಿರುವ ವಿಶೇಷ ರೀತಿಯ ಜೇಡಿ ಮಣ್ಣಿನಂಥ (ಫೈರ್‍ಕ್ಲೇ) ರಚನಾಸಾಮಗ್ರಿಯನ್ನು ಉಪಯೋಗಿಸಿ ಕಟ್ಟಲಾಗುವ ಕಟ್ಟಡಗಳಿಗೆ ಈ ಹೆಸರಿದೆ. ಈ ಜೇಡಿಮಣ್ಣಿಗೆ ಅಧಿಕವಾಗಿ ಸುರುಟಿಕೊಳ್ಳದೆ ಅಥವಾ ವಕ್ರವಾಗಿದೆ, ಅತ್ಯಧಿಕ ಉಷ್ಣತೆಯನ್ನು ತಡೆದುಕೊಳ್ಳಬಲ್ಲ ಗುಣವಿದೆ. ಇಂಥ ವಸ್ತುಗಳಿಂದ ಕಟ್ಟಲಾಗುವ ಕಟ್ಟಡಗಳು ಅಗ್ನಿಯಿಂದಾಗುವ ಎಲ್ಲ ಬಗೆಯ ಅನಾಹುತಗಳನ್ನು ಎದುರಿಸಿ ನಿಲ್ಲಬಲ್ಲುವಾಗಿವೆ. ಇದಲ್ಲದೆ ದಹಿಸಿ, ಉಷ್ಣತೆಯನ್ನು ಹೊರ ಬಿಡದ ಸಾಮಗ್ರಿಗಳನ್ನು ಇಂಥ ಕಟ್ಟಡಗಳ ರಚನೆಗೆ ಉಪಯೋಗಿಸುತ್ತಾರೆ. ವಿಶೇಷ ರೀತಿಯ ಘನ ಜೇಡಿಮಣ್ಣಿನ ಇಟ್ಟಿಗೆಗಳು, ಕಾಂಕ್ರಿಟ್-ಇವೇ ಸೂಕ್ತವಸ್ತುಗಳು. ಉಕ್ಕು ದಹಿಸದ ವಸ್ತುವಾದರೂ ಬೆಂಕಿಯ ನೇರಸಂಪರ್ಕದಲ್ಲಿ ವಿಕಾಸಗೊಂಡು ಕಟ್ಟಡಕ್ಕೆ ಧಕ್ಕೆ ತರುವುದಲ್ಲದೆ ತನ್ನ ರಚನೆಯ ಸಾಮಥ್ರ್ಯವನ್ನು (ಸ್ಟ್ರಕ್ಚ್ಯುರಲ್ ಸ್ಟ್ರೆಂಗ್ತ್) ಕಳೆದುಕೊಳ್ಳುತ್ತದೆ. ಆದ್ದರಿಂದ ಉಕ್ಕಿನಿಂದಾದ ವಸ್ತುಗಳ ಹೊರಮೈಯನ್ನೂ ನಿರೋಧಕವಸ್ತುಗಳಿಂದ ಮುಚ್ಚಿ ಕಟ್ಟಡದ ರಚನೆಗೆ ಬಳಸಿದ್ದಾದರೆ ಈ ತೊಂದರೆ ನೀಗುತ್ತದೆ.

 ಕಟ್ಟಡಗಳ ರಚನಾ ಸಾಮಗ್ರಿಗಳನ್ನು ಅವುಗಳ ಅಗ್ನಿನಿರೋಧಕ ಸಾಮಥ್ರ್ಯಕ್ಕನುಗುಣವಾಗಿ ವರ್ಗೀಕರಣ ಮಾಡಲಾಗಿದೆ. ಈ ಕಾರ್ಯದಲ್ಲಿ ಮೌಲ್ಯವನ್ನು ನಿರ್ಧರಿಸುವ ವ್ಯಾಪಕವಾದ ಪರೀಕ್ಷೆಗಳ ಪಾತ್ರ ಮಹತ್ವದ್ದು. ಈ ಕೆಲಸವನ್ನು ಸಾಮಾನ್ಯವಾಗಿ ತಾಂತ್ರಿಕ ಹಾಗೂ ಅಗ್ನಿವಿಭಾಗದ ಸಿಬ್ಬಂದಿ ವರ್ಗದವರು ನಡೆಸುತ್ತಾರೆ. ಇದರಿಂದಾಗಿ ತಮ್ಮ ತಮ್ಮ ಅಗತ್ಯಗಳಿಗೆ ಇರಬೇಕಾದಂಥ ಅಗ್ನಿನಿರೋಧಪ್ರಮಾಣವನ್ನು (1/2 ಗಂಟೆಯಿಂದ ಹಿಡಿದು 6 ಗಂಟೆಯವರೆಗೆ) ಇಂಜಿನಿಯರು, ನಿರ್ಮಾತೃಗಳು ಮೊದಲಾದವರು ನಿರ್ಧರಿಸಿಕೊಳ್ಳುತ್ತಾರೆ. ಭಿತ್ತಿಫಲಕ (ವಾಲ್ ಬೋರ್ಡ್) ಅಥವಾ ಕಟ್ಟಡಫಲಕಗಳನ್ನು ಒಳಗೆಲಸಗಳಿಗಾಗಿ ಬಳಸಿ ಅವುಗಳ ಮೇಲ್ಮೈ ಮೇಲಿನ ಜ್ವಾಲೆಯನ್ನು ಹರಡುವ ಗುಣಗಳಿಗನುಸಾರವಾಗಿ ಅವುಗಳ ಯೋಗ್ಯತೆಯನ್ನು ನಿರ್ಧರಿಸುತ್ತಾರೆ. ಅಗ್ನಿನಿರೋಧಕ ಒಳಗೋಡೆಗಳನ್ನುಳ್ಳ ದೊಡ್ಡ ದೊಡ್ಡ ಕಟ್ಟಡಗಳಿಗೆ ಇಡುವ ಬಾಗಿಲು ಮತ್ತು ಕಿಟಕಿಗಳನ್ನು ಯಾವುದೇ ಬಗೆಯ ಅಗ್ನಿಯನ್ನು ಒಳಬಿಡದಂತೆ ಅಳವಡಿಸಿರಬೇಕು. ಅವು ಇನ್ನೂ ಪರಿಣಾಮಕಾರಿಯಾಗಿರಬೇಕಾದರೆ, ಅಗ್ನಿಯಿಂದ ಉಂಟಾಗುವ ಉಷ್ಣತೆಯನ್ನನುಸರಿಸಿ ತಾವಾಗಿಯೇ ಮುಚ್ಚಿಕೊಳ್ಳುವಂತಿರಬೇಕು. ಇಂಥವನ್ನು ಬ್ಯಾಂಕು, ಆಹಾರಸಂಗ್ರಹಣಾಕೇಂದ್ರ ಮೊದಲಾದುವುಗಳಲ್ಲಿ ಇತ್ತೀಚೆಗೆ ಬಳಸುತ್ತಿದ್ದಾರೆ.

(ಎಸ್.ಆರ್.ಪಿ.)

  (ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ